Beti Bachavo, Beti Padavo |
ದೇಶದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ, ಅವಕಾಶಗಳನ್ನು ನೀಡುವ ಸಲುವಾಗಿ ಮತ್ತು ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಲಿಂಗ ತಾರತಮ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಪ್ರತಿ ವರ್ಷ ಜ.24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಹೆಣ್ಣು ಮಗುವಿನ ವಿರುದ್ಧದ ತಾರತಮ್ಯ ಎಂಬುದು ನಮ್ಮ ಸಮಾಜಕ್ಕಂಟಿದ ಅತೀ ದೊಡ್ಡ ಪಿಡುಗು. ಶಿಕ್ಷಣ, ಸಾಮಾಜಿಕ ನ್ಯಾಯ, ಪೋಷಣೆ, ರಕ್ಷಣೆ, ಗೌರವ ಎಲ್ಲಾ ವಿಷಯದಲ್ಲೂ ಹೆಣ್ಣು ಮಗುವನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಬಾಲ್ಯ ವಿವಾಹ, ವರದಕ್ಷಿಣೆ ಪದ್ಧತಿ ಆಕೆಯ ಸುಂದರ ಬದುಕನ್ನು ನರಕ ಮಾಡುತ್ತಿವೆ.
ಭಾರತ ಸರ್ಕಾರದ ರಾಷ್ಟ್ರೀಯ ಹೆಣ್ಣುಮಕ್ಕಳ ಅಭಿವೃದ್ಧಿ ಮಿಶನ್ 2008ರಿಂದ ಪ್ರತಿ ವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಣೆ ಮಾಡಿಕೊಂಡು ಬರುತ್ತಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಉತ್ತೇಜನ ಮತ್ತು ಅವಕಾಶಗಳನ್ನು ನೀಡುವ ಉದ್ದೇಶ ಇದರ ಹಿಂದಿದೆ.
ಹೆಣ್ಣಿನ ವಿರುದ್ಧದ ಎಲ್ಲ ತಾರತಮ್ಯಗಳನ್ನು ತೊಡೆದು ಹಾಕುವ ಮತ್ತು ಅವರ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಿಸುವ ಅವಶ್ಯಕತೆ ಪ್ರಸ್ತುತ ಇದೆ. ಹೆಣ್ಣು ಸಬಲ, ಸ್ವಾವಲಂಬಿಯಾದಾಗ ಮಾತ್ರ ಸಮಾಜ ಆಕೆಯನ್ನು ಹೆಚ್ಚು ಗೌರವದಿಂದ ಕಾಣುತ್ತದೆ. ಶಿಕ್ಷಣಕ್ಕೆ ಮಾತ್ರ ಆಕೆಯನ್ನು ಸ್ವಾವಲಂಬಿಯಾಗಿಸುವ ಶಕ್ತಿ ಇದೆ. ಆ ಶಿಕ್ಷಣವನ್ನು ಆಕೆಗೆ ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
ಮಹಿಳಾ ಸಂವರ್ಧನೆಯಲ್ಲಿ ಸುಕನ್ಯಾ ಸಮೃದ್ಧಿ ಖಾತೆಯ ಪಾತ್ರ ಮಹತ್ವ ಪಡೆದುಕೊಂಡಿದೆ ಭಾರತೀಯ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಸುಕನ್ಯಾ ಸಮೃದ್ಧಿ ಖಾತೆ ಕುರಿತು ಕಿರು ಪರಿಚಯ ಈ ಕೆಳಗೆ ವಿವರಿಸಲಾಗಿದೆ.
ಹಿನ್ನೆಲೆ: 2001ರ ಜನಗಣತಿಯ ಪ್ರಕಾರ ಲಿಂಗಾನುಪಾತ ಸಾವಿರ ಪುರುಷರಿಗೆ 933 ಇತ್ತು. ಅದು 2011ರ ಜನಗಣತಿ ಪ್ರಕಾರ ಲಿಂಗಾನುಪಾತ ಸಾವಿರ ಪುರುಷರಿಗೆ 943 ಆಗಿದೆ. ಈ ದಶಕದ ಜನಸಂಖ್ಯೆಯ ಬೆಳವಣಿಗೆ ದರವನ್ನು ಪರಿಗಣಿಸಿದರೆ ಲಿಂಗಾನುಪಾತದಲ್ಲಿ ಹೆಚ್ಚಿನ ಗಣನೀಯ ಬದಲಾವಣೆ ಕಂಡುಬರಲಿಲ್ಲ. ಈ ಲಿಂಗ ತಾರತಮ್ಯವನ್ನುಹೋಗಲಾಡಿಸಲು ಭಾರತ ಸರ್ಕಾರ 2014-15 ನೇ ಸಾಲಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಅಡಿಯಲ್ಲಿ ಲಭ್ಯವಿರುವ ಮಾತೃ ವಂದನ, ಹೆಣ್ಣು ಮಕ್ಕಳ ವಿಶೇಷ ಶಿಕ್ಷಣ ಮುಂತಾದ ಯೋಜನೆಗಳಂತೆ ಸುಕನ್ಯಾ ಸಮೃದ್ಧಿ ಖಾತೆ ಯನ್ನು ಆರಂಭಿಸಲಾಯಿತು.
ಸದ್ಯ ಲಭ್ಯವಿರುವ ಉಳಿತಾಯ ಖಾತೆಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಅತಿ ಹೆಚ್ಚು ಬಡ್ಡಿ ತರುವ ಖಾತೆ ಆಗಿದೆ. ನಿಮ್ಮ ಹೂಡಿಕೆ ಚಕ್ರಬಡ್ಡಿ ರೂಪದಲ್ಲಿ ಬೆಳೆಯುವುದು ಆದ್ದರಿಂದ ನಿಮ್ಮ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಖಾತೆ ಪ್ರಾರಂಭಿಸಿ.
ಏನಿದು ಸುಕನ್ಯಾ ಸಮೃದ್ಧಿ ಯೋಜನೆ?
ಹೆಣ್ಣು ಮಗುವಿನ ಉನ್ನತ ಶಿಕ್ಷಣ,ವ್ಯಾಸಂಗ ಹಾಗೂ ಮದುವೆ ಮುಂತಾದ ಜೀವನದ ಮಹತ್ತರ ಘಟ್ಟಗಳನ್ನು ಸುಲಲಿತವಾಗಿ ನಿಭಾಯಿಸಲು ಸಹಾಯಕವಾಗುವ ಖಾತೆ.
ಅರ್ಹತೆ: ನವಜಾತ ಶಿಶುವಿನಿಂದ ಹತ್ತು ವರ್ಷದ ಒಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಪೋಷಕರು ಖಾತೆಯನ್ನು ತೆರೆಯಬಹುದು. ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಕೇವಲ ಒಂದು ಖಾತೆಯನ್ನು ಮಾತ್ರ ಪ್ರಾರಂಭಿಸಬೇಕು ಮತ್ತು ಒಬ್ಬ ಪೋಷಕರು ಎರಡು ಹೆಣ್ಣು ಮಕ್ಕಳಿಗಿಂತ ಹೆಚ್ಚಿನ ಖಾತೆಗಳನ್ನು ಪ್ರಾರಂಭಿಸಲು ಬರುವುದಿಲ್ಲ.
ಅವಧಿ:
1.ಖಾತೆಯ ಒಟ್ಟು ಅವಧಿ 21 ವರ್ಷಗಳು
2.ಖಾತೆಗೆ ಹಣ ಕಟ್ಟುವ ಅವಧಿ 15 ವರ್ಷಗಳು.
ಬಡ್ಡಿ ದರ: ಬಡ್ಡಿ ದರವು ಪ್ರತೀ ತ್ರೈಮಾಸಿಕದ ಅವಧಿಯಲ್ಲಿ ಪರಿಷ್ಕರಣೆಗೊಳ್ಳುತ್ತದೆ. ಪ್ರಸ್ತುತ ತ್ರೈಮಾಸಿಕದ ಬಡ್ಡಿ ದರ 8.4 % ಇರುತ್ತದೆ.
ಕನಿಷ್ಠ ಮೊತ್ತ: ಖಾತೆಯನ್ನು ಆರಂಭಿಸಲು ಹಾಗೂ ಮುಂದಿನ ಹಣಕಾಸು ವರ್ಷಕ್ಕೆ ಖಾತೆಯನ್ನು ಸಕ್ರಿಯವಾಗಿ ಇಡಲು ಕನಿಷ್ಠ 250/- ರೂಪಾಯಿಗಳನ್ನು ತುಂಬಬೇಕು.
ಗರಿಷ್ಠ ಮೊತ್ತ: ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1,50,000/- ರೂಪಾಯಿಗಳನ್ನು ಮಾತ್ರ ತುಂಬಬೇಕು.
ಅವಧಿಪೂರ್ವ ಹಣ ಹಿಂಪಡೆಯುವುದು/ನಿಯಮ/ಕರಾರುಗಳು: ಹೆಣ್ಣು ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಖಾತೆಯ ಅವಧಿ ಪೂರ್ಣಗೊಳ್ಳುವ ಮುನ್ನ, ಯಾವುದೇ ಸಮಯದಲ್ಲಿ, ಆ ದಿನ ಖಾತೆಯಲ್ಲಿ ಲಭ್ಯವಿರುವ ಹಣದ ಅರ್ಧದಷ್ಟನ್ನು ಮದುವೆಯ ಕಾರಣಕ್ಕೆ ಅಥವಾ ಉನ್ನತ ವ್ಯಾಸಂಗದ ಕಾರಣಕ್ಕೆ ಪಡೆಯಲು ಅವಕಾಶವಿದೆ ಉಳಿದ ಹಣವನ್ನು ಅವಧಿ ಪೂರ್ಣಗೊಂಡ ನಂತರ ವಿತರಿಸಲಾಗುವುದು.
ನಿರೀಕ್ಷಿತ ಮೊತ್ತ: ಉದಾಹರಣೆಗೆ
ಪಾಲಕರ ಕೊಡುಗೆ: 1000 ರೂಪಾಯಿ x 12 ತಿಂಗಳು x 16 ವರ್ಷ = 180000/-
21ನೇ ವರ್ಷಕ್ಕೆ ಪ್ರತಿಫಲಿತ ನಿರೀಕ್ಷಿತ ಮೊತ್ತ, ಸರಿ ಸುಮಾರು 6 ಲಕ್ಷ ರೂಪಾಯಿಗಳು.
ಪಾಲಕರ ಕೊಡುಗೆ ಹೆಚ್ಚಿದಷ್ಟು ನಿರೀಕ್ಷಿತ ಮೊತ್ತವನ್ನು ಹೆಚ್ಚಿಗೆ ಪಡೆಯಬಹುದು.
ತೆರಿಗೆ ರಿಯಾಯಿತಿ: ಪಾಲಕರು, ಇನ್ಕಮ್ ಟ್ಯಾಕ್ಸ್ ಅಕ್ಟ್ 80C ಅಡಿಯಲ್ಲಿ ಗರಿಷ್ಠ 1,50,000/- ರೂಪಾಯಿಗಳವರೆಗೆ ತೆರಿಗೆ ರಿಯಾಯಿತಿ ಪಡೆಯಬಹುದು.
ಅಗತ್ಯ ದಾಖಲೆಗಳು
KYC ದಾಖಲೆಗಳು
ಪಾಲಕರು: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ವಿದ್ಯುತ್ ಬಿಲ್, ಮುಂತಾದ ದಾಖಲೆಗಳಲ್ಲಿ ಯಾವುದಾದರೂ ಎರಡು ದಾಖಲೆ ಸಲ್ಲಿಸಬೇಕು.
ಹೆಣ್ಣು ಮಗು:
Birth Certificate-ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ
3 ಫೋಟೋ (ಮಗು ಹಾಗೂ ಪೋಷಕರ)
ತೆರಿಗೆ ರಿಯಾಯಿತಿ ಹಾಗೂ ಚಕ್ರಬಡ್ಡಿ ರೂಪದ ಹೆಚ್ಚಿನ ಬಡ್ಡಿ ದರವನ್ನು ನೀಡುವ ಸುಕನ್ಯಾ ಸಮೃದ್ಧಿ ಖಾತೆ, ಪಾಲಕರು ಉಳಿತಾಯ ಹಾಗೂ ಹೆಣ್ಣು ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ ಒದಗಿಸುತ್ತದೆ. ಆದ್ದರಿಂದ ಹೆಣ್ಣು ಮಗುವಿನ ಪೋಷಕರು ಭವಿಷ್ಯದ ದಿನಗಳಲ್ಲಿ ನಿಮ್ಮ ಹೆಣ್ಣು ಮಗುವಿನ ಜೀವನದ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವಲ್ಲಿ ಯಾವುದೇ ಅಡೆತಡೆ, ಭಯ,ಆತಂಕ, ಹಣಕಾಸಿನ ಕೊರತೆ ಬಾರದಂತೆ ನೋಡಿಕೊಳ್ಳಲು ಕಡ್ಡಾಯವಾಗಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಪ್ರಾರಂಭಿಸಿ ನಿಮ್ಮ ಹೆಣ್ಣು ಮಗುವಿನ ಇತರೆ ಧಾರ್ಮಿಕ ಸಂಸ್ಕಾರಗಳನ್ನು ಕೈಗೊಳ್ಳುವಂತೆ ಸುಕನ್ಯಾ ಸಮೃದ್ಧಿ ಖಾತೆ ಯನ್ನು ಪ್ರಾರಂಭಿಸುವುದು ಕೂಡ ಒಂದು ಧಾರ್ಮಿಕ ಸಂಸ್ಕಾರ ಎಂದೇ ಪರಿಗಣಿಸಿ ಖಾತೆಯನ್ನು ಆರಂಭಿಸಿ, ಹಾಗೂ ಈಗಾಗಲೇ ಖಾತೆಯನ್ನು ತರದ ಪೋಷಕರು ತಮ್ಮ ವಂತಿಗೆಯನ್ನು ಮುಂದುವರಿಸಿ. ನಿಮ್ಮ ಮಗಳ ಸುಭದ್ರ ಭವಿಷ್ಯಕ್ಕೆ ಇಂದೇ ನಾಂದಿ ಹಾಡಿ.
ಸುಕನ್ಯಾ ಸಮೃದ್ಧಿ ಖಾತೆಯ ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಿ.
ಬೇಟಿ ಬಚಾವೋ ಬೇಟಿ ಪಡಾವೋ..!
ಕಾಮೆಂಟ್ ಪೋಸ್ಟ್ ಮಾಡಿ