World's First Parliament "Anubhava Mantapa"

  ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸಂವಿಧಾನ ಜಾರಿಗೊಳಿಸಿದ ದಿನವನ್ನು  'ಗಣರೋಜ್ಯೋತ್ಸವ' ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದೇಶಿ ಗಣ್ಯರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ, ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆ, ಕಲಾ ವೈಭವ, ಆಚಾರ ವಿಚಾರ, ವೈಜ್ಞಾನಿಕ ಸಾಧನೆ, ಸೇನಾ ಬಲ, ಮಾನವ ಕಲ್ಯಾಣದಲ್ಲಿ ಭಾರತದ ಕೊಡುಗೆಯನ್ನು ಜಗತ್ತಿಗೆ ಸಾರುವ ಪಥಸಂಚಲನ (#RepublicDayParade) ಹಾಗೂ ಸ್ತಬ್ಧಚಿತ್ರ (#Tableau) ಪ್ರದರ್ಶನ ಗಣರೋಜ್ಯೋತ್ಸದ ಪರಂಪರೆ ಮತ್ತು ಪ್ರಮುಖ ಆಕರ್ಷಣೆ.

  ಪ್ರತಿ ವರ್ಷವೂ ಜನವರಿ   26 ರಂದು ದೆಹಲಿಯಲ್ಲಿ ನಡೆಯುವ ಗಣರೋಜ್ಯೋತ್ಸವದ ಪಥಸಂಚಲನದಲ್ಲಿ ಎಲ್ಲ ರಾಜ್ಯಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತವೆ. 2020 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಕರ್ನಾಟಕದ 'ಅನುಭವ ಮಂಟಪ'ದ ಸ್ತಬ್ಧಚಿತ್ರ 71 ನೇ ಗಣರಾಜ್ಯೋತ್ಸವದ ಕೇಂದ್ರಬಿಂದು.

  ಭಾರತವು ಸಂವಿಧಾನವನ್ನು ಅಳವಡಿಸಿಕೊಂಡು 70 ವರ್ಷಗಳು ಪೂರ್ಣಗೊಂಡು ಹಾಗೂ ಸ್ವತಂತ್ರ ಗಣರಾಜ್ಯವಾಗಿರುವ ಈ ಸಂದರ್ಭದಲ್ಲಿ ಅನುಭವ ಮಂಟಪ ಸ್ತಬ್ಧಚಿತ್ರವು ವಿಶೇಷ ಮಹತ್ವ ಪಡೆದಿದೆ. 

  'ಅನುಭವ ಮಂಟಪ' ವನ್ನು "ಜಗತ್ತಿನ ಪ್ರಪ್ರಥಮ ಸಂಸತ್ತು" ಎಂದು ಪರಿಗಣಿಸಲಾಗಿದೆ. ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ 12 ನೇ ಶತಮಾನ ದಲ್ಲಿ ಅಸ್ತಿತ್ವಕ್ಕೆ ಬಂದ ಅನುಭವ ಮಂಟಪ  'ಅಲ್ಲಮಪ್ರಭು'ಗಳ ಅಧ್ಯಕ್ಷತೆಯಲ್ಲಿ ಮಹಾತ್ಮ ಬಸವೇಶ್ವರ, ಶಿವಶರಣೆ ಅಕ್ಕಮಹಾದೇವಿ ಇಲ್ಲಿನ ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಿದ್ದರು.  ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯ ಪ್ರಾಕಾರಗಳಲ್ಲಿ ಕಂಡುಬರದ ವಚನ ಸಾಹಿತ್ಯದ ಮೂಲಕ ಮಾನವ ಮೌಲ್ಯಗಳ ಪೂರ್ಣತೆ, ಪ್ರಗತಿಶೀಲ, ಜಾತ್ಯಾತೀತ, ವರ್ಗರಹಿತ,   ಸಮಾಜ ನಿರ್ಮಾಣದ ದಿವ್ಯ ಧ್ಯೇಯದೊಂದಿಗೆ ಸಮಾಜ ಸುಧಾರಣೆಗೆ ಕಾರಣವಾದ ವಚನ ಸಾಹಿತ್ಯದ ಕೇಂದ್ರ ಸ್ಥಳವಾಗಿ 'ಅನುಭವ ಮಂಟಪ' ಕಾರ್ಯನಿರ್ವಹಿಸುತ್ತಿತ್ತು.

   'ಅನುಭವ ಮಂಟಪ'ವು ಸಾಮಾಜಿಕ, ಧಾರ್ಮಿಕ, ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಮಾನವ ಸಮಾಜದ ಅಭಿವೃದ್ಧಿಗಾಗಿ ಆಧ್ಯಾತ್ಮಿಕ, ತತ್ವಶಾಸ್ತ್ರ ಆಧಾರದ ಮೇಲೆ ಬಸವೇಶ್ವರರು ಹಾಕಿಕೊಟ್ಟ ಸಮಾನತೆಯ ದೃಷ್ಟಿಕೋನ, ಸೋದರತೆ ಮತ್ತು ಸಹಭಾಗಿತ್ವದ ಹಾದಿಯಲ್ಲಿ ಸಮಾಜದ ಸುಧಾರಣೆಗಾಗಿ ಇಂದಿಗೆ ಒಂಭತ್ತು ಶತಮಾನ ದ ಹಿಂದೆಯೇ ಸಾಮಾಜಿಕ ದೃಷ್ಟಿಕೋನವುಳ್ಳ ಪ್ರಜಾಪ್ರಭುತ್ವ ತಳಹದಿಯ ಚಿಂತಕರ ಚಾವಡಿಯಾಗಿತ್ತು. ಇಂತಹ ಮಹೋನ್ನತ ಕೂಟದ  
ಸ್ತಬ್ಧಚಿತ್ರ ಗಣರೋಜ್ಯೋತ್ಸವದ ಪಥಸಂಚಲನದಲ್ಲಿ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ನಮ್ಮೆಲ್ಲ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

 ನವದೆಹಲಿಯ ಗಣರಾಜ್ಯೋತ್ಸವ ಪ್ರದರ್ಶನಕ್ಕೆ ಕರ್ನಾಟಕ ಸ್ತಬ್ಥಚಿತ್ರವು ಸತತ ಹನ್ನೊಂದನೇ ಬಾರಿಗೆ ಆಯ್ಕೆಗೊಂಡಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

  ಭಾರತೀಯ ಅಂಚೆ ಇಲಾಖೆ ಕೂಡ 'ಅನುಭವ ಮಂಟಪ'ದ ಮಹತ್ವವನ್ನು ಜಗತ್ತಿಗೆ ಪಸರಿಸಿ ಗೌರವಿಸಲು  ಒಂದು 'ವಿಶೇಷ ಅಂಚೆ ಲಕೋಟೆ'ಯನ್ನು (Special Cover) 'ಶಾಶ್ವತ ಚಿತ್ರ ಮುದ್ರೆ'ಯನ್ನು  (Permanent Pictorial Cancelation) ಬಿಡುಗಡೆ ಮಾಡಿದೆ. ಈ ಶಾಶ್ವತ ಚಿತ್ರ ಮುದ್ರೆ' ಬಸವಕಲ್ಯಾಣ ಅಂಚೆ ಕಚೇರಿಯಲ್ಲಿ ಲಭ್ಯವಿದ್ದು ಯಾವುದೇ ಅಂಚೆ ಸಾಮಗ್ರಿಗಳ(Postal Stationery) ಮೇಲೆ ಮುದ್ರೆ ಹಾಕಿಸಿ ಇಟ್ಟಕೊಳ್ಳಬಹುದು.  ಅಂಚೆ ಚೀಟಿ ಸಂಗ್ರಹ ಹವ್ಯಾಸದಲ್ಲಿ (Philately) 'ಶಾಶ್ವತ ಚಿತ್ರ ಮುದ್ರೆ' ಗೆ ಹಾಗೂ  'ವಿಶೇಷ ಅಂಚೆ ಲಕೋಟೆ'ಗೆ  ವಿಶಿಷ್ಟವಾದ ಸ್ಥಾನವಿದೆ. ಹವ್ಯಾಸಿಗಳು ಬಸವಕಲ್ಯಾಣಕ್ಕೆ ಪ್ರವಾಸ ಕೈಗೊಂಡಾಗ ಅಂಚೆ ಕಚೇರಿಗೆ ಭೇಟಿ ನೀಡಿ ಲಕೋಟೆ ಮತ್ತು ಮುದ್ರೆ ಪಡೆದುಕೊಳ್ಳಬಹುದು.
Permanet Pictorial Cancelation of "Anubhava Mantapa"

Post a Comment

ನವೀನ ಹಳೆಯದು