PINCODE ಇತಿಹಾಸ ತಿಳಿಯಿರಿ; ಬಳಸಿರಿ.

       
          ದೂರವಾಣಿ ಬರುವುದಕ್ಕಿಂತ ಮೊದಲು  ಪ್ರಮುಖ ಸಂಪರ್ಕ ಮಾಧ್ಯಮವಾಗಿದ್ದ ಪತ್ರವ್ಯವಹಾರ,  ವಿವಿಧ ವಿಚಾರ, ಸಂದೇಶ, ಭಾವನೆಗಳ ವಿನಿಮಯದ  ಕೊಂಡಿ ಆಗಿತ್ತು,  ನಿಮ್ಮ ಭಾವನೆಗಳನ್ನು, ಹೃದಯದ ಸಂದೇಶವನ್ನು,  ಖುಷಿಯ ಕ್ಷಣದ ನೆನಪುಗಳನ್ನು, ದುಗುಡ ದುಮ್ಮಾನಗಳನ್ನು,  ಆರೋಗ್ಯ, ಕ್ಷೇಮ  ಕುಶಲೋಪರಿ ಯನ್ನು ಅಕ್ಷರ ರೂಪದಲ್ಲಿ   ಕಾಗದದ ಮೇಲೆ ಮೂಡಿಸಿ, ವಿಳಾಸವೆಂಬ ಗಮ್ಯವನ್ನು  ಅರಸಿ   ತೆರಳಲು ಅಂಚೆ ಪೆಟ್ಟಿಗೆಯಲ್ಲಿ ಹಾಕಲಾಗುತ್ತಿತ್ತು.  ಕೊನೆಗೆ ಅಂಚೆಯಣ್ಣನ ಮೂಲಕ   ನಿಗದಿತ ವಿಳಾಸ, ಸ್ಥಳ ಅಥವಾ ವ್ಯಕ್ತಿಗೆ  ವಿತರಿಸಲಾಗುತ್ತಿತ್ತು ಮತ್ತು ವಿತರಿಸಲಾಗುತ್ತಿದೆ. ಆದರೆ  ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ  ಪತ್ರ ರವಾನೆಯಾಗುವ   ಮತ್ತು ವಿಂಗಡನೆಯ ಹಂತದಲ್ಲಿ ಅನೇಕ ಸಮಸ್ಯೆಗಳನ್ನು   ಎದುರಿಸಬೇಕಾಗಿತ್ತು.    ಅವುಗಳಲ್ಲಿ ಪ್ರಮುಖ ಸವಾಲುಗಳು ಎಂದರೆ,

ಸ್ಥಳದ ಹೆಸರುಗಳಲ್ಲಿನ ಸಾಮ್ಯತೆ- ಒಂದೇ ಹೆಸರಿನ ಅನೇಕ ಊರುಗಳನ್ನು ನಮ್ಮ ದೇಶದಲ್ಲಿ ಕಾಣಬಹುದು.  ಉದಾಹರಣೆಗೆ 'ಇಟಗಿ' ಎಂಬ ಊರು ಕರ್ನಾಟಕದ  ಐದಾರು ತಾಲೂಕುಗಳಲ್ಲಿ ಕಾಣಬಹುದು, ಇನ್ನು ಬಸಾಪುರ, ಹೊಸೂರುಗಳಿಗೆ ಲೆಕ್ಕವೇ ಇಲ್ಲ. ಅದೇ ರೀತಿ  ಬಸವೇಶ್ವರನಗರ, ಗಾಂಧೀನಗರ ಎಂಬ  ಸ್ಥಳಗಳನ್ನು ಅನೇಕ ಪ್ರಮುಖ ನಗರಗಳಲ್ಲಿ ಕಾಣಬಹುದು.

ವಿವಿಧ ಭಾಷೆಗಳು:   ವಿಶಾಲ ವೈವಿಧ್ಯಮಯ ಭಾರತದಲ್ಲಿ 22 ಅಧಿಕೃತ ಭಾಷೆಗಳು 13 ಅಧಿಕೃತ ಲಿಪಿಗಳನ್ನು ಕಾಣಬಹುದು.  ಇಷ್ಟೊಂದು ವೈವಿಧ್ಯತೆ ಇರುವ ದೇಶದಲ್ಲಿ ಪತ್ರ ವ್ಯವಹಾರ ಮಾಡುವಾಗ ಜನರು ತಮಗೆ ಅನುಕೂಲಕ್ಕೆ ತಕ್ಕಂತಹ ಭಾಷೆಯಲ್ಲಿ   ವಿಳಾಸವನ್ನು ಬರೆದು  ಕಳಿಸಿದಾಗ ಅನ್ಯ ರಾಜ್ಯದಲ್ಲಿ ಅಥವಾ ಅನ್ಯಭಾಷಿಕರಲ್ಲಿ  ಪತ್ರ ವಿಂಗಡಣೆಯ ಸಮಸ್ಯೆ ಎದುರಾಗುತ್ತಿತ್ತು.

ತಪ್ಪಾದ ವಿಳಾಸ ನಮೂದಿಸುವುದು:  ವಿಳಾಸ ಬರೆಯುವ ಸರಿಯಾದ ವಿಧಾನವೆಂದರೆ ಮೇಲಿನಿಂದ ಕೆಳಗೆ  ಬರೆಯುವುದು ಎಂದು ಪರಿಗಣಿಸುವುದಾದರೆ ಮೊದಲನೆ ಸಾಲಿನಲ್ಲಿ ಹೆಸರು ಅಥವಾ ಹುದ್ದೆಯ ಹೆಸರನ್ನು ನಮೂದಿಸಬೇಕು.  ಎರಡನೇ  ಸಾಲಿನಲ್ಲಿ  ಮನೆಯ ಸಂಖ್ಯೆ, ರಸ್ತೆ, ಓಣಿಯ,  ಪ್ರದೇಶ,  ಮೊದಲಾದ ಹೆಸರುಗಳನ್ನು ನಮೂದಿಸಬೇಕು.  ಕೊನೆಯ ಸಾಲಿನಲ್ಲಿ ಊರಿನ ಹೆಸರನ್ನು ನಮೂದಿಸಬೇಕು.  ಆದರೆ ಎಲ್ಲರೂ ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಿಸುತ್ತಾರೆ ಎಂದು ಹೇಳಲಾಗುವುದಿಲ್ಲ ಕೆಲವರು ತಮ್ಮ ಮನಸೋಇಚ್ಚೆ ಬರೆದು ಕಳಿಸುವುದು ಉಂಟು,  ವಿಳಾಸ ಬರೆಯುವ ಕ್ರಮದಲ್ಲಿ ವ್ಯತ್ಯಾಸವಾದರೆ ಪತ್ರ ವಿಂಗಡಣೆಯಲ್ಲಿ ವಿಳಂಬವಾಗುವುದು. 

           ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು  ಮತ್ತು  ಪತ್ರ  ಬಟವಾಡೆಯ ವೇಗ ಮತ್ತು ದಕ್ಷತೆಯನ್ನು ಹೆಚ್ಚಿಸಲು ಪೋಸ್ಟಲ್ ಇಂಡೆಕ್ಸ್ ನಂಬರ್ (Postal Index Number) Pincode ಎಂಬ ಪರಿಕಲ್ಪನೆಯನ್ನು  ಅಗಸ್ಟ್ 15, 1972 ರಲ್ಲಿ  ಕೇಂದ್ರ ಸಂಪರ್ಕ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ  ಯಾದ ಶ್ರೀ "ಶ್ರೀರಾಮ್ ಭಿಕಾಜಿ  ವೆಲನರ್"  ಜಾರಿಗೊಳಿಸಿದರು.  

            ಒಟ್ಟು ಆರು  ಅಂಕೆಯ ಪಿನ್ ಕೋಡ್ ನಲ್ಲಿ ಮೊದಲನೇ  ಅಂಕೆ  ಅಂಚೆ ವಲಯವನ್ನು, ಎರಡನೇ ಆಯ್ಕೆ ಉಪ ಅಂಚೆಯ ವಲಯವನ್ನು, ಮೂರನೇ ಅಂಕೆ ಅಂಚೆ ವಿಂಗಡನ ಜಿಲ್ಲೆಯನ್ನು  ಹಾಗೂ ಕೊನೆಯ ಮೂರು ಅಂಕಿಗಳು ಅಂಚೆ ಕಚೇರಿಯ ಸಂಖ್ಯೆಯನ್ನು ಪ್ರತಿನಿಧಿಸುತ್ತವೆ. 

ಅಂಚೆ ವಲಯಗಳು:
ಪಿನ್ ಕೋಡ್ ಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳನ್ನು ಒಟ್ಟುಗೂಡಿಸಿ,   ಒಂಬತ್ತು ಅಂಚೆ ವಲಯಗಳಾಗಿ ವಿಂಗಡಿಸಲಾಗಿದೆ.  ಅವುಗಳನ್ನು ಈ ಕೆಳಗಿನಂತೆ ನೋಡಬಹುದು.

1:  ದೆಹಲಿ-11, ಹರ್ಯಾಣ-12-13, ಪಂಜಾಬ್-14-15, ಚಂದೀಗಡ-16, ಹಿಮಾಚಲ ಪ್ರದೇಶ-17, ಜಮ್ಮು ಮತ್ತು ಕಾಶ್ಮೀರ-18-19  

2:  ಉತ್ತರಪ್ರದೇಶ-20-27, ಉತ್ತರಕಾಂಡ-28

3:    ರಾಜಸ್ಥಾನ-30-34, ಗುಜರಾತ್-36-39, ದಮನ್ ಮತ್ತು ದೀವ್ ದಾದರ್ ಮತ್ತು ನಗರ್ ಹವೇಲಿ-396.

4:  ಮಹಾರಾಷ್ಟ್ರ-40-44 , ಗೋವಾ-403, ಮಧ್ಯಪ್ರದೇಶ45-48, ಛತ್ತಿಸ್ಗಢ-49

5:  ತೆಲಂಗಾಣ-50,  ಆಂಧ್ರಪ್ರದೇಶ-51-53, ಕರ್ನಾಟಕ-56-59 
ಉದಾಹರಣೆ:  ಬೆಂಗಳೂರು ಜಿಪಿಒ:560001
ಧಾರವಾಡ  ಪ್ರಧಾನ ಅಂಚೆ ಕಚೇರಿ:580001
ಬೆಳಗಾವಿ ಪ್ರಧಾನ ಅಂಚೆ ಕಚೇರಿ:590001

6:  ತಮಿಳುನಾಡು-60-66, ಕೇರಳ-67-69, ಪಾಂಡಿಚೇರಿ-605, ಲಕ್ಷದ್ವೀಪ-682

7:  ಪಶ್ಚಿಮ ಬಂಗಾಳ-70-74,  ಒರಿಸ್ಸಾ-75-77, ಅರುಣಾಚಲ ಪ್ರದೇಶ-790-792, ನಾಗಾಲ್ಯಾಂಡ್-797-798, ಮಣಿಪುರ-795, ಮೀಜೊರಾಮ್796, ತ್ರಿಪುರ-799, ಮೇಘಾಲಯ-793-794, ಅಂಡಮಾನ್ ಮತ್ತು ನಿಕೋಬಾರ್-744,  ಅಸ್ಸಾಂ-78,  ಸಿಕ್ಕಿಂ-737

8:  ಬಿಹಾರ-80-85, ಜಾರ್ಖಂಡ್-80-85

9:   ಆರ್ಮಿ ಪೋಸ್ಟ್ ಆಫೀಸ್, ಫೀಲ್ಡ್ ಪೋಸ್ಟ್ ಆಫೀಸ್-90-99

       ಪಿನ್ ಕೋಡ್ ಬಳಸುವುದರಿಂದ ಸ್ಥಳದ ಹೆಸರುಗಳಲ್ಲಿನ ಸಾಮ್ಯತೆ, ತಪ್ಪಾದ ವಿಳಾಸ ನಮೂದಿಸುವುದು,   ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸಿ ವಿವಿಧ ಪತ್ರವನ್ನು ವಿಂಗಡಿಸಲು ಮತ್ತು ಬಟವಾಡೆ ಮಾಡಲು  ಸಹಕಾರಿಯಾಗುತ್ತದೆ.   ಆದ್ದರಿಂದ  ಪತ್ರವ್ಯವಹಾರದಲ್ಲಿ  ಪಿನ್ ಕೋಡ್ ಅನ್ನು ಕಡ್ಡಾಯವಾಗಿ ಬಳಸಿ.  ವಿವಿಧ ಸಂದರ್ಭದಲ್ಲಿ ನಿಮ್ಮ ಮನೆಯ ವಿಳಾಸವನ್ನು ನೀಡುವಾಗ  ಪಿನ್ಕೋಡ್ ಸಹಿತವಾಗಿ ನೀಡಿ.   ನೀವಿರುವ ಸ್ಥಳದ  ಪಿನ್ ಕೋಡ್ ಅನ್ನು ತಿಳಿಯಲು ನಿಮ್ಮಲ್ಲಿ ಸಂದರ್ಶಿಸುವ ಪೋಸ್ಟ್ಮನ್ನನ್ನು(ಅಂಚೆಯಣ್ಣ) ಕೇಳಿ ಪಡೆಯಬಹುದು.   ಭಾರತೀಯ ಅಂಚೆ ಇಲಾಖೆ www.indiapost.gov.in ವೆಬ್ಸೈಟ್ ಸಂದರ್ಶಿಸಬಹುದು,  ಪ್ಲೇ ಸ್ಟೋರ್ (Play Store) ನಲ್ಲಿ ಲಭ್ಯವಿರುವ ಪೋಸ್ಟ್ ಇನ್ಫೋ  (Postinfo-App)    ಡೌನ್ಲೋಡ್   ಮಾಡಿಕೊಳ್ಳಬಹುದು ಅಥವಾ ಗೂಗಲ್ ಸರ್ಚ್ ನಲ್ಲೂ ಕೂಡ ಪಡೆಯಬಹುದು.   

       ಯಾವುದೇ ಕಛೇರಿಗಳು,  ಅಂಗಡಿ ಮುಗ್ಗಟ್ಟುಗಳು,  ಶಾಲಾ-ಕಾಲೇಜುಗಳು,  ತಮ್ಮ ಬೋರ್ಡಿನಲ್ಲಿ,   ಲೆಟರ್ಹೆಡ್ ಗಳಲ್ಲಿ ಊರಿನ ಹೆಸರಿನೊಂದಿಗೆ  ಪಿನ್ ಕೋಡ್ ಅನ್ನು ಕಡ್ಡಾಯವಾಗಿ  ನಮೂದಿಸಿ.   ಇದರಿಂದ ಎಲ್ಲರಿಗೂ ನಿಮ್ಮೂರಿನ ಪಿನ್ಕೋಡ್ ಅರಿಯಲು  ಸಹಾಯಕವಾಗುವುದು, ಅಲ್ಲದೆ ಬೋರ್ಡಿನ ಅಂದವನ್ನು ಕೂಡ ಹೆಚ್ಚಿಸುತ್ತದೆ.

  ಅಂಚೆ ಕಾರ್ಡ್ ನಲ್ಲಿ ಕೊಟ್ಟಿರುವ ಆರು ಬಾಕ್ಸ್ ಗಳು  "ನನಗೆಗೊತ್ತಿಲ್ಲ"  ಎಂಬ 'ಪದಬಂಧ'ವನ್ನು ತುಂಬಲು ಅಲ್ಲ,  ಬದಲಾಗಿ ನಿಮಗೆ ಗೊತ್ತಿರುವ ವಿಳಾಸದ ಅಂಕಿಯನ್ನು ಬರೆಯಲು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

"ಪಿನ್ ಕೋಡ್  ಪತ್ರವೆಂಬ ಹಕ್ಕಿಗೆ ರೆಕ್ಕೆ ಕಟ್ಟಿದಂತೆ"  

" ಪಿನ್ ಕೋಡ್ - ಪತ್ರವೆಂಬ ಹಕ್ಕಿಯ ರೆಕ್ಕೆ "

" ನಿಮಗೆ ಮೊಬೈಲ್ ಸಂಖ್ಯೆ : ನೀವು ಇರುವ ಸ್ಥಳಕ್ಕೆ ಪಿನ್ ಕೋಡ್ ಸಂಖ್ಯೆ" 

ಪಿನ್ ಕೋಡ್ ತಪ್ಪದೇ ಬಳಿಸಿ, ಕಡ್ಡಾಯವಾಗಿ ಬಳಸಿ.


ನಿಮಗಿದು ತಿಳಿದಿರಲಿ:  ಭಾರತದಲ್ಲಿ 6 ಅಂಕಿಗಳ  ಪಿನ್ ಕೋಡ್ ಬಳಸಿದಂತೆ, ವಿದೇಶಗಳಲ್ಲಿ  5 ಅಂಕಿಗಳ ಜಿಪ್ ಕೋಡ್ ಅನ್ನು ಬಳಸುತ್ತಾರೆ.

PINCODE

ನಿಮ್ಮೂರಿನ ಅಥವಾ ಏರಿಯಾದ ಪಿನ್ ಕೋಡ್ ಸಂಖ್ಯೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ. 

2 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು