'ಡಾಕ್ ಪೇ' ಆ್ಯಪ್ ಯುಪಿಐ ಸೌಲಭ್ಯವುಳ್ಳ ಒಂದು ಖಾತೆಯಾಗಿದ್ದು, ಕೇವಲ ಯುಪಿಐ ಸೌಲಭ್ಯದ ಮೂಲಕ ಹಣ ವರ್ಗಾವಣೆಗೆ ಮಾತ್ರ ಅವಕಾಶ ನೀಡುವ ಇತರೆ ಖಾಸಗಿ ಯುಪಿಐ ಆ್ಯಪ್ಗಳಿಗಿಂತ 'ಡಾಕ್ ಪೇ' ಆ್ಯಪ್ ಭಿನ್ನವಾಗಿದೆ , 'ಡಾಕ್ ಪೇ' ಆ್ಯಪ್ ಒಂದು ಖಾತೆಯಾಗಿರುವದರಿಂದ ಕೇವಲ ಹಣ ವರ್ಗಾವಣೆ ಮಾತ್ರವಲ್ಲದೆ ಉಳಿತಾಯ ಕೂಡ ಮಾಡಬಹುದಾಗಿದೆ. 'ಡಾಕ್ ಪೇ' ಆ್ಯಪ್ನಲ್ಲಿಯೇ ದೂರು ನೀಡುವ ಸೌಲಭ್ಯ ಕಲ್ಪಿಸಿದ್ದು, ತೊಂದರೆಗಳಿದ್ದಲ್ಲಿ ಮೊಬೈಲ್ ಮೂಲಕವೇ ಪರಿಹರಿಸಿಕೊಳ್ಳಬಹುದು.
ಕೇಂದ್ರ ಸರಕಾರದ 'ಡಿಜಿಟಲ್ ಇಂಡಿಯಾ' (Digital India) ಕನಸನ್ನು ಗ್ರಾಮೀಣ ಮಟ್ಟದಲ್ಲೂ ಕೂಡ ಸಾಕಾರಗೊಳಿಸಲು 'ಡಾಕ್ ಪೇ' (DakPay) ನೆರವಾಗಲಿದೆ. ಏಕೆಂದರೆ ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಅಂಚೆ ಜಾಲವನ್ನು(India Post-World's Largest Postal Network) ಹೊಂದಿದ್ದು, ಸುಮಾರು 155625 ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಇದರಲ್ಲಿ ಶೇಕಡಾ 90 ಕ್ಕೂ ಹೆಚ್ಚು ಅಂಚೆ ಕಚೇರಿಗಳು ಗ್ರಾಮೀಣ ಭಾಗದಲ್ಲಿವೆ. ಗ್ರಾಮೀಣ ಜನರ ದೈನಂದಿನ ಹಣಕಾಸಿನ ವ್ಯವಹಾರಕ್ಕೆ ಅಂಚೆ ಕಚೇರಿಗಳು ಮನೆಮನೆಗೆ ತಲುಪಿ ಸೇವೆ ನೀಡುತ್ತಿವೆ. ಈ ಮೂಲಕ ಸರ್ವರಿಗೂ ಬ್ಯಾಂಕಿಂಗ್ ನ ಸೌಲಭ್ಯ ನೀಡುವ ಮೂಲಕ ಆರ್ಥಿಕ ಒಳಗೊಳ್ಳುವಿಕೆಗೆ (Financial Inclusion) ಅಂಚೆ ಕಚೇರಿಗಳು ನೆರವಾಗಿವೆ.
ಭಾರತದಾದ್ಯಂತ ಡಿಜಿಟಲ್ ಹಣಕಾಸು ವ್ಯವಸ್ಥೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ 'ಡಾಕ್ ಪೇ' ಆ್ಯಪ್ ಬಿಡುಗಡೆ ಮಾಡಲಾಗಿದ್ದು. ಹಣ ವರ್ಗಾವಣೆ, ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ, ಖರೀದಿ ಹಾಗೂ ಸೇವೆಗಳಲ್ಲಿ ವರ್ಚುವಲ್ ಡೆಬಿಟ್ ಕಾರ್ಡ್ ಮತ್ತು ಯುಪಿಐ ಬಳಸಿ ಪಾವತಿಸುವುದು, ಯಾವುದೇ ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಹಾಗೂ ಬಿಲ್ ಪಾವತಿ ಸೇವೆಗಳು ಈ ಆ್ಯಪ್ ಮೂಲಕ ಸಿಗಲಿದೆ.
31.03.2021 ರವರೆಗೆ ಶೂನ್ಯ ಮೊತ್ತದ ಚಾಲ್ತಿ ಖಾತೆ ತೆರೆಯಬಹುದಾಗಿದ್ದು, ದೊಡ್ಡ ವ್ಯಾಪರಿಗಳು ಮಾತ್ರವಲ್ಲದೆ, ಸಣ್ಣ ಪಾನ್ ಶಾಪ್ ಅಂಗಡಿಯವರು, ತರಕಾರಿ, ಹಣ್ಣಿನ ಅಂಗಡಿಯವರು, ದರ್ಜಿಗಳು, ನೇಕಾರರು, ಆಟೋ ಚಾಲಕರು, ಖಾನಾವಳಿ ಹೋಟೆಲ್ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಕೂಡ ಖಾತೆ ತೆರೆಯಬಹುದು. ಆದರೆ ಏಪ್ರಿಲ್ 1 ನಂತರ ಚಾಲ್ತಿ ಖಾತೆ ತೆರೆದಲ್ಲಿ, ಖಾತೆಯಲ್ಲಿ ಕನಿಷ್ಠ ೧೦೦೦ ರೂ ಗಳನ್ನು ಕಡ್ಡಾಯವಾಗಿ ಉಳಿಸಿಕೊಳ್ಳಬೇಕಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ನೇರ ನಗದು ವರ್ಗಾವಣೆ (DBT-ಡಿಬಿಟಿ ) ಕೂಡ ಈ ಖಾತೆಯಲ್ಲಿ ಪಡೆಯಬಹುದಾಗಿದ್ದು, ಶೂನ್ಯ ಖಾತೆಯಾದ್ದರಿಂದ ಎಲ್ಲರೂ ಖಾತೆಯನ್ನು ತೆರೆಯಬಹುದಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿವೇತನ (ಸ್ಕಾಲರ್ಷಿಪ್) ಪಡೆಯಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರಯಬಹುದು.
ನಿಮ್ಮ ಮನೆ ಬಾಗಿಲಿಗೆ ಬರುವ ಪೋಸ್ಟ್ಮನ್ ಮುಖಾಂತರ, ಅಂಚೆಕಚೇರಿಗೆ ಭೇಟಿ ಇಡುವ ಮೂಲಕ ಅಥವಾ ಪ್ಲೇ ಸ್ಟೋರ್ ಮೂಲಕ 'ಡಾಕ್ ಪೇ' ಆ್ಯಪ್ ಡೌನ್ಲೋಡ್ ಮಾಡಿ ಖಾತೆ ತೆರೆಯಬಹುದು.
ಕಾಮೆಂಟ್ ಪೋಸ್ಟ್ ಮಾಡಿ