ಅಂಚೆ ಜೀವ ವಿಮೆ -Postal Life Insurance (ಪೋಸ್ಟಲ್ ಲೈಫ್ ಇನ್ಸುರೆನ್ಸ್ -ಪಿಎಲ್‌ಐ) ಸಂಪೂರ್ಣ ಮಾಹಿತಿ
ನಮ್ಮ ದೇಶದಲ್ಲಿ ಜೀವ ವಿಮೆ ಮಾಡಿಸುವುದೇನಂದರೇನೇ LIC ಎನ್ನುವ ಮಟ್ಟಿಗೆ LIC ತನ್ನ ಛಾಪನ್ನು ಮೂಡಿಸಿದೆ. ಆದರೆ ಜೀವ ವಿಮೆ ನೀಡುವಲ್ಲಿ ಹಲವಾರು ಸರಕಾರಿ ಹಾಗೂ ಖಾಸಗಿ ಕಂಪನಿಗಳು ಇದ್ದು, LIC ಮತ್ತು ಇತರೆ ಎಲ್ಲ ಜೀವ ವಿಮಾ ಕಂಪನಿಗಳಿಗಿಂತ ಕಡಿಮೆ ಪ್ರೀಮಿಯಂ ಹಣ ಪಡೆದು ಹೆಚ್ಚಿನ ಬೋನಸ್ ನೀಡುವ ಸರ್ಕಾರಿ ಜೀವ ವಿಮೆ ಅದು ಅಂಚೆ ಜೀವ ವಿಮೆ ಪೋಸ್ಟಲ್ ಲೈಫ್ ಇನ್ಶೂರೆನ್ಸ್.
ಹೌದು ದೇಶದ ಅಂಚೆ ಕಚೇರಿಗಳಲ್ಲಿ ಸಹ ಜೀವ ವಿಮಾ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು ಎಂಬುದು ಕೆಲವರಿಗೆ ತಿಳಿದಿಲ್ಲ. ಅಂಚೆ ಜೀವ ವಿಮೆ (ಪೋಸ್ಟಲ್ ಲೈಫ್ ಇನ್ಸುರೆನ್ಸ್ -ಪಿಎಲ್‌ಐ) ಎಂಬ ಹೆಸರಲ್ಲಿ ಜೀವವಿಮಾ ಪಾಲಿಸಿಗಳನ್ನು ನೀಡಲಾಗುತ್ತಿದೆ.
ಜೀವ ವಿಮೆ ಎಂದರೇನು? ಜೀವ ವಿಮೆ ಎಂದರೆ -ಸರಳವಾಗಿ ಹೇಳಬೇಕೆಂದರೆ ಯಾವುದೇ ವ್ಯಕ್ತಿ ತನ್ನ ಆಕಸ್ಮಿಕ ಸಾವಿನಿಂದ ತನ್ನ ಕುಟುಂಬದ ಸದಸ್ಯರು ಆರ್ಥಿಕ ಸಂಕಷ್ಟದಿಂದ ಬಳಲಬಾರದು ಎಂದು ನಿರ್ಧರಿಸಿ ತನ್ನ ಸಕ್ತಾನುಸಾರವಾಗಿ ಒಂದು ನಿರ್ಧಿಷ್ಟ ಆಶ್ವಾಸಿತ ಮೊಬಲಗಿಗೆ (ಇಡುಗಂಟಿನ ಮೊತ್ತ) ಯೋಜನಯ ಅನುಸಾರವಾಗಿ ವಂತಿಗೆ ನೀಡಿ, ಯೋಜನಾ ಪ್ರತಿಫಲ ಪಡೆಯುತ್ತೇನೆ ಎಂದು ವಿಮೆ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದ ಎಂದು ಹೇಳಬಹುದು.
ಅಂಚೆ ಜೀವ ವಿಮೆ - ಪೋಸ್ಟಲ್ ಲೈಫ್ ಇನ್ಸುರೆನ್ಸ್ (Postal Life Insurance)
ಸಾಮಾನ್ಯ ಜೀವವಿಮಾ ಕಂಪನಿಯ ಜೀವವಿಮಾ ಯೋಜನೆಯಂತೆಯೇ ಪೋಸ್ಟಲ್ ಲೈಫ್ ಇನ್ಸುರೆನ್ಸ್ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯನ್ನು ಅಂಚೆ ಇಲಾಖೆಯೇ ನಿರ್ವಹಿಸುವುದು ವಿಶೇಷವಾಗಿದೆ. ಪಿಎಲ್‌ಐ ನಲ್ಲಿ ಕೇವಲ ಸಾಂಪ್ರದಾಯಿಕ ಜೀವವಿಮಾ ಪಾಲಿಸಿಗಳನ್ನು ಪಡೆಯಬಹುದಾಗಿದೆ. ಇದರಲ್ಲಿ ಟರ್ಮ ಇನ್ಸುರೆನ್ಸ್ ಅಥವಾ ಯುಲಿಪ್ ಯೋಜನೆಗಳು ಇಲ್ಲ.
ಅಂಚೆ ಇಲಾಖೆ ನೌಕರರಿಗಾಗಿ 1884 ರಲ್ಲಿ ಪ್ರಥಮ ಬಾರಿಗೆ ಅಂಚೆ ಜೀವ ವಿಮೆ ಆರಂಭಿಸಲಾಯಿತು. ಇದರಲ್ಲಿ ಸಿಂಗಲ್ ಇನ್ಸುರೆನ್ಸ್ ಪ್ಲ್ಯಾನ್ಸ್ ಹಾಗೂ ಗ್ರಾಮೀಣ ಡಾಕ್ ಸೇವಕ ಸಿಬ್ಬಂದಿಗಾಗಿ ಗ್ರೂಪ್ ಇನ್ಸುರೆನ್ಸ್ ಪ್ಲ್ಯಾನ್‌ಗಳೂ ಇವೆ. ಪ್ರಸ್ತುತ ಎಷ್ಟು ರೀತಿಯ ಪಿಎಲ್‌ಐ ಯೋಜನೆಗಳಿವೆ ಹಾಗೂ ಅವುಗಳ ವಿಶೇಷತೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ.
1. ಸುರಕ್ಷಾ (Whole Life Assurance -ಸಂಪೂರ್ಣ ಜೀವ ವಿಮೆ)
ಈ ಯೋಜನೆಯಲ್ಲಿ ಖಾತರಿ ವಿಮಾ ಮೊತ್ತ ಹಾಗೂ ಜಮೆಯಾದ ಬೋನಸ್‌ಗಳನ್ನು ಸೇರಿಸಿ ಪಾಲಿಸಿದಾರನಿಗೆ 80 ವರ್ಷ ವಯಸ್ಸಾದ ನಂತರ ನೀಡಲಾಗುತ್ತದೆ. ಒಂದೊಮ್ಮೆ 80 ವರ್ಷಗಳಾಗುವ ಮುಂಚೆಯೇ ಪಾಲಿಸಿದಾರ ಮೃತಪಟ್ಟಲ್ಲಿ ಆತನ ನಾಮಿನಿ ಅಥವಾ ಕಾನೂನಾತ್ಮಕ ಸಂಬಂಧಿಗೆ ಹಣವನ್ನು ನೀಡಲಾಗುತ್ತದೆ. ಆದರೆ ಕ್ಲೇಮ್ ಮಾಡುವ ಸಮಯದಲ್ಲಿ ಪಾಲಿಸಿಯನ್ನು ಜಾರಿಯಲ್ಲಿಟ್ಟಿರುವುದು ಅಗತ್ಯವಾಗಿದೆ. ಕನಿಷ್ಠ 19 ವರ್ಷ ಹಾಗೂ ಗರಿಷ್ಠ 55 ವರ್ಷ ವಯೋಮಾನದವರು ಈ ವಿಮಾ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಕನಿಷ್ಠ ಖಾತರಿ ವಿಮಾ ಮೊತ್ತ (ಸಮ್ ಅಶ್ಯುರ್ಡ್) 20 ಸಾವಿರ ರೂ. ಹಾಗೂ ಗರಿಷ್ಠ 50 ಲಕ್ಷ ರೂ. ಆಗಿದೆ. ಪಾಲಿಸಿ ಆರಂಭಿಸಿದ 4 ವರ್ಷಗಳ ನಂತರ ಸಾಲ ಸೌಲಭ್ಯವಿದೆ ಹಾಗೂ 3 ವರ್ಷಗಳ ನಂತರ ಬೇಕಾದರೆ ಪಾಲಿಸಿಯನ್ನು ಸರೆಂಡರ್ ಮಾಡಬಹುದು.
2. ಸಂತೋಷ (Endowment Assurance - ಎಂಡೋಮೆಂಟ್ ಅಶ್ಯುರೆನ್ಸ್)
ಈ ಯೋಜನೆಯಲ್ಲಿ ಪಾಲಿಸಿದಾರನಿಗೆ ವಿಮಾ ಖಾತರಿ ಮೊತ್ತ (ಸಮ್ ಅಶ್ಯುರ್ಡ್) ಹಾಗೂ ಸಂಚಿತ ಬೋನಸ್ ಮೊತ್ತದ ಖಾತರಿಯನ್ನಿ ನೀಡಲಾಗುತ್ತದೆ. ಪೂರ್ವ ನಿರ್ಧರಿತವಾದ ಮ್ಯಾಚುರಿಟಿ ವಯಸ್ಸು ಅಂದರೆ 35, 40, 45, 5೦, 55, 58, ಅಥವಾ 60ನೇ ವಯಸ್ಸಿನಲ್ಲಿ ಖಾತರಿ ಮ್ಯಾಚುರಿಟಿ ಮೊತ್ತವನ್ನು ಪಡೆಯಬಹುದು. ಒಂದೊಮ್ಮೆ ಪಾಲಿಸಿದಾರ ಮೃತಪಟ್ಟಲ್ಲಿ ಆತನ ನಾಮಿನಿ ಅಥವಾ ಕಾನೂನಾತ್ಮಕ ಸಂಬಂಧಿಗೆ ಮೊತ್ತವನ್ನು ನೀಡಲಾಗುತ್ತದೆ. ಕನಿಷ್ಠ 19 ವರ್ಷ ಹಾಗೂ ಗರಿಷ್ಠ 55 ವರ್ಷ ವಯೋಮಾನದವರು ಈ ವಿಮಾ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಕನಿಷ್ಠ ಖಾತರಿ ವಿಮಾ ಮೊತ್ತ (ಸಮ್ ಅಶ್ಯೂರ್ಡ್) 20 ಸಾವಿರ ರೂ. ಹಾಗೂ ಗರಿಷ್ಠ 50 ಲಕ್ಷ ರೂ. ಆಗಿದೆ. ಪಾಲಿಸಿ ಆರಂಭಿಸಿದ 4 ವರ್ಷಗಳ ನಂತರ ಸಾಲ ಸೌಲಭ್ಯವಿದೆ ಹಾಗೂ 3 ವರ್ಷಗಳ ನಂತರ ಬೇಕಾದರೆ ಪಾಲಿಸಿಯನ್ನು ಸರೆಂಡರ್ ಮಾಡಬಹುದು.
03. ಸುವಿಧಾ (Convertible Whole Life Insurance-ಕನ್ವರ್ಟಿಬಲ್ ಹೋಲ್ ಲೈಫ್ ಇನ್ಸುರೆನ್ಸ್)
ಇದೊಂದು ಹೋಲ್ ಲೈಫ್ ಇನ್ಸುರೆನ್ಸ್ ಪಾಲಿಸಿ ಆಗಿದ್ದು, 5 ವರ್ಷಗಳ ನಂತರ ಬೇಕಾದರೆ ಇದನ್ನು ಎಂಡೋಮೆಂಟ್ ಪಾಲಿಸಿಯಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಮ್ಯಾಚುರಿಟಿ ವಯೋಮಾನದ ಸಂದರ್ಭದಲ್ಲಿ ಸಮ್ ಅಶ್ಯುರ್ಡ್ ಹಾಗೂ ಸಂಚಿತ ಬೋನಸ್ ಮೊತ್ತದ ಖಾತರಿಯನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ. ಒಂದೊಮ್ಮೆ ಪಾಲಿಸಿದಾರ ಮೃತಪಟ್ಟಲ್ಲಿ ನಾಮಿನಿ ಅಥವಾ ಕಾನೂನಾತ್ಮಕ ಸಂಬಂಧಿಗೆ ಹಣ ಪಾವತಿಸಲಾಗುವುದು. ಇದರಲ್ಲಿ ಕನಿಷ್ಠ ಖಾತರಿ ವಿಮಾ ಮೊತ್ತ (ಸಮ್ ಅಶ್ಯುರ್ಡ್) 20 ಸಾವಿರ ರೂ. ಹಾಗೂ ಗರಿಷ್ಠ 50 ಲಕ್ಷ ರೂ. ಆಗಿದೆ. ಪಾಲಿಸಿ ಆರಂಭಿಸಿದ 4 ವರ್ಷಗಳ ನಂತರ ಸಾಲ ಸೌಲಭ್ಯವಿದೆ ಹಾಗೂ 3 ವರ್ಷಗಳ ನಂತರ ಬೇಕಾದರೆ ಪಾಲಿಸಿಯನ್ನು ಸರೆಂಡರ್ ಮಾಡಬಹುದು.
4. ಸುಮಂಗಲ (Anticipated Endowment Assurance-ನಿರೀಕ್ಷಿತ ಎಂಡೋಮೆಂಟ್ ಅಶ್ಯೂರೆನ್ಸ್)
ಇದೊಂದು ಮನಿ ಬ್ಯಾಕ್ ಪಾಲಿಸಿ ಆಗಿದ್ದು, ಗರಿಷ್ಠ 50 ಲಕ್ಷ ರೂ. ಸಮ್ ಅಶ್ಯೂರ್ಡ್ ಮಾಡಿಸಬಹುದು. ನಿಯಮಿತ ಅವಧಿಗಳಲ್ಲಿ ಆದಾಯ ಪಡೆಯಬಯಸುವವರಿಗೆ ಈ ಯೋಜನೆ ಸೂಕ್ತವಾಗಿದೆ. ಅಂದರೆ ಪಾಲಿಸಿಯ ಅವಧಿಯ ನಿಗದಿತ ಸಮಯಗಳಲ್ಲಿ ಪಾಲಿಸಿದಾರನಿಗೆ ಸರ್ವೈವಲ್ ಬೆನೆಫಿಟ್‌ಗಳು ಸಿಗುತ್ತವೆ. ಒಂದೊಮ್ಮೆ ಪಾಲಿಸಿದಾರ ಅಕಾಲಿಕ ಮರಣ ಹೊಂದಿದರೆ ಈ ನಿಯಮಿತ ಆದಾಯಗಳನ್ನು ಪರಿಗಣಿಸುವಂತಿಲ್ಲ. ಅಂಥ ಸಂದರ್ಭಗಳಲ್ಲಿ ಸಂಪೂರ್ಣ ವಿಮಾ ಖಾತರಿ ಮೊತ್ತ ಹಾಗೂ ಸಂಚಿತ ಬೋನಸ್ ಮೊತ್ತಗಳನ್ನು ಸೇರಿಸಿ ನಾಮಿನಿ ಅಥವಾ ಕಾನೂನಾತ್ಮಕ ಸಂಬಂಧಿಗೆ ನೀಡಲಾಗುತ್ತದೆ.
ಇದರಲ್ಲಿ 15 ವರ್ಷ ಹಾಗೂ 20 ವರ್ಷ ಹೀಗೆ ಎರಡು ಅವಧಿಯ ಯೋಜನೆಗಳಿವೆ. ಕನಿಷ್ಠ 19 ವರ್ಷ ವಯೋಮಾನದವರು ಈ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ 2೦ ವರ್ಷ ಅವಧಿಯ ಪಾಲಿಸಿ ಪಡೆಯಬೇಕಾದರೆ ಗರಿಷ್ಠ 4೦ ವರ್ಷ ವಯಸ್ಸು ಹಾಗೂ 15 ವರ್ಷದ ಪಾಲಿಸಿ ಪಡೆಯಲು ಗರಿಷ್ಠ 45 ವರ್ಷ ವಯಸ್ಸು ನಿಗದಿಪಡಿಸಲಾಗಿದೆ.
ಸರ್ವೈವಲ್ ಬೆನಿಫಿಟ್ ಪಾವತಿ :
15 ವರ್ಷದ ಪಾಲಿಸಿ - 6, 9 ಮತ್ತು 12ನೇ ವರ್ಷಗಳ ಕೊನೆಯಲ್ಲಿ ಪ್ರತಿಬಾರಿ ಶೇ.2೦ ರಷ್ಟು ಹಾಗೂ ಮ್ಯಾಚುರಿಟಿ ಸಂದರ್ಭದಲ್ಲಿ ಶೇ. 40 ರಷ್ಟು ಮೊತ್ತ ಹಾಗೂ ಸಂಚಿತ ಬೋನಸ್ ನೀಡಲಾಗುತ್ತದೆ.
20 ವರ್ಷದ ಪಾಲಿಸಿ - 8, 12 ಮತ್ತು 16 ನೇ ವರ್ಷಗಳ ಕೊನೆಯಲ್ಲಿ ಪ್ರತಿಬಾರಿ ಶೇ. 20 ರಷ್ಟು ಹಾಗೂ ಮ್ಯಾಚುರಿಟಿ ಸಂದರ್ಭದಲ್ಲಿ ಶೇ. 40 ರಷ್ಟು ಮೊತ್ತ ಹಾಗೂ ಸಂಚಿತ ಬೋನಸ್ ನೀಡಲಾಗುತ್ತದೆ.
5. ಯುಗಳ ಸುರಕ್ಷಾ (Joint Life Insurance -ಜಂಟಿ ಜೀವವಿಮಾ ಪಾಲಿಸಿ)
ಇದೊಂದು ಜಂಟಿ ಎಂಡೋಮೆಂಟ್ ಜೀವವಿಮಾ ಪಾಲಿಸಿ ಆಗಿದೆ. ಗಂಡ ಅಥವಾ ಹೆಂಡತಿ ಇಬ್ಬರಲ್ಲೊಬ್ಬರು ಅಂಚೆ ಜೀವವಿಮೆ ಪಡೆಯುವ ಅರ್ಹತೆ ಹೊಂದಿರಬೇಕು. ಇಬ್ಬರಿಗೂ ವಿಮಾ ಖಾತರಿ ಮೊತ್ತದಷ್ಟು (ಸಮ್ ಅಶ್ಯೂರ್ಡ) ಜೀವವಿಮೆ ಹಾಗೂ ಅನ್ವಯಿಸುವ ಸಂಚಿತ ಬೋನಸ್ ನೀಡಲಾಗುತ್ತದೆ. ಕನಿಷ್ಠ 21 ವರ್ಷ ಹಾಗೂ ಗರಿಷ್ಠ 45 ವರ್ಷ ವಯೋಮಾನ ನಿಗದಿಪಡಿಸಲಾಗಿದೆ. ಕನಿಷ್ಠ ಸಮ್ ಅಶ್ಯೂರ್ಡ 20 ಸಾವಿರ ರೂ ಹಾಗೂ ಗರಿಷ್ಠ 50 ಲಕ್ಷ ರೂ. ಗಳಾಗಿದೆ. ಪಾಲಿಸಿ ಪಡೆಯುವ ಹಿರಿಯ ಪಾಲಿಸಿದಾರನ ವಯಸ್ಸು 45 ವರ್ಷ ಮೀರಿರಬಾರದು ಹಾಗೂ ಸಂಗಾತಿಗಳಿಬ್ಬರೂ 21 ರಿಂದ 45 ವರ್ಷ ವಯೋಮಾನದೊಳಗೆ ಇರಬೇಕು. 3 ವರ್ಷಗಳ ನಂತರ ಈ ಯೋಜನೆಯಲ್ಲಿ ಸಾಲ ಸೌಲಭ್ಯವಿರುತ್ತದೆ. ಸಂಗಾತಿಗಳ ಪೈಕಿ ಯಾರಾದರೂ ಒಬ್ಬರು ತೀರಿಕೊಂಡಲ್ಲಿ ಇನ್ನೊಬ್ಬ ಸಂಗಾತಿಗೆ ಡೆಥ್ ಬೆನಿಫಿಟ್ಸ್ ಪಾವತಿಸಲಾಗುತ್ತದೆ.
6. ಬಾಲ ಜೀವನ ಬೀಮಾ (Children Policy ಚಿಲ್ಡ್ರನ್ ಪಾಲಿಸಿ)
ಅಂಚೆ ಜೀವವಿಮಾ ಪಾಲಿಸಿದಾರರ ಮಕ್ಕಳಿಗೆ (ಗರಿಷ್ಠ 2 ಮಕ್ಕಳು) ಜೀವವಿಮೆ ನೀಡಲು ಈ ಯೋಜನೆ ರೂಪಿಸಲಾಗಿದೆ. 5 ರಿಂದ 20 ವರ್ಷ ವಯೋಮಾನದೊಳಗಿನ ಮಕ್ಕಳು ಯೋಜನೆಗೆ ಅರ್ಹರಾಗಿರುತ್ತಾರೆ. ಗರಿಷ್ಠ ಸಮ್ ಅಶ್ಯೂರ್ಡ್ 3 ಲಕ್ಷ ರೂ. ಅಥವಾ ಪಾಲಕರ ಗರಿಷ್ಠ ಸಮ್ ಅಶ್ಯೂರ್ಡ್‌ನಷ್ಟು, ಯಾವುದು ಕಡಿಮೆಯೋ ಅದು ಅನ್ವಯಿಸುತ್ತದೆ. ಪಾಲಿಸಿ ಹೊಂದಿದ ಪಾಲಕರು ವಯಸ್ಸು 45 ಮೀರಿರಬಾರದು. ಒಂದೊಮ್ಮೆ ಪಾಲಿಸಿ ಹೊಂದಿದ ಪಾಲಕರ ಮರಣ ಸಂಭವಿಸಿದಲ್ಲಿ ಮಗುವಿನ ಪಾಲಿಸಿಗೆ ಯಾವುದೇ ಕಂತು ಕಟ್ಟುವ ಅವಶ್ಯಕತೆ ಇರುವುದಿಲ್ಲ. ಪಾಲಿಸಿ ಅವಧಿ ಮುಗಿದ ನಂತರ ಸಂಪೂರ್ಣ ಸಮ್ ಅಶ್ಯೂರ್ಡ್ ಮತ್ತು ಸಂಚಿತ ಬೋನಸ್ ಮೊತ್ತಗಳನ್ನು ಪಾವತಿಸಲಾಗುತ್ತದೆ.
ಅಂಚೆ ಜೀವ ವಿಮೆ ಪಡೆಯಲು ಅರ್ಹತೆ ಹೊಂದಿದ ಉದ್ಯೋಗಿಗಳು
ಈ ಮುಂಚೆ ಸರಕಾರದ ನಿರ್ಬಂಧಗಳಿಂದ ಈ ಯೋಜನೆಗೆ ಕೆಲ ವರ್ಗದ ಜನತೆ ಮಾತ್ರ ಅರ್ಹವಾಗಿದ್ದರು. ಆದರೆ ಇತ್ತೀಚೆಗೆ ಇದರಲ್ಲಿನ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು ಮತ್ತಷ್ಟು ಹೆಚ್ಚು ವಲಯದ ಜನತೆ ಪಿಎಲ್‌ಐ ಲಾಭ ಪಡೆಯಬಹುದಾಗಿದೆ.
- ಕೇಂದ್ರ ಸರಕಾರ
- ರಕ್ಷಣಾ ಇಲಾಖೆ
- ಅರೆ ಸೇನಾ ಪಡೆ
- ರಾಜ್ಯ ಸರಕಾರ
- ಸ್ಥಳೀಯ ಸಂಸ್ಥೆಗಳು
- ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳು
- ರಿಸರ್ವ ಬ್ಯಾಂಕ ಆಫ್ ಇಂಡಿಯಾ
- ಸಾರ್ವಜನಿಕ ವಲಯದ ಉದ್ದಿಮೆಗಳು
- ಹಣಕಾಸು ಸಂಸ್ಥೆಗಳು
- ರಾಷ್ಟ್ರೀಕೃತ ಬ್ಯಾಂಕುಗಳು
- ಸ್ವಾಯತ್ತ ಸಂಸ್ಥೆಗಳು
- ಅಂಚೆ ಇಲಾಖೆಯ ಹೊರಗುತ್ತಿಗೆ ನೌಕರರು
- ವೃತ್ತಿಪರರು
- ಶೆಡ್ಯೂಲ್ಡ್ ಕಮರ್ಶಿಯಲ್ ಬ್ಯಾಂಕ್ ಉದ್ಯೋಗಿಗಳು
- ಕೋ ಆಪರೇಟಿವ್ ಕಾಯ್ದೆ ಅಡಿಯಲ್ಲಿ ನೋಂದಾಯಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಇತರ ಕೋ ಆಪರೇಟಿವ್ ಸೊಸೈಟಿ ಉದ್ಯೋಗಿಗಳು ಹಾಗೂ ಕೇಂದ್ರ/ರಾಜ್ಯ ಸರಕಾರಗಳು/ ಆರ್‌ಬಿಐ/ ಎಸ್‌ಬಿಐ/ ರಾಷ್ಟ್ರೀಕೃತ ಬ್ಯಾಂಕ್‌ಗಳು/ ನಬಾರ್ಡ ಮತ್ತು ಸರಕಾರ ಅಧಿಸೂಚಿಸಿದ ಇತರ ಯಾವುದೇ ಸಂಸ್ಥೆಗಳಿಂದ ಸಂಪೂರ್ಣ ಅಥವಾ ಭಾಗಶಃ ಹಣಕಾಸು ಬೆಂಬಲ ಹೊಂದಿರುವ ಕೋ ಆಪರೇಟಿವ್ ಸೊಸೈಟಿ ಉದ್ಯೋಗಿಗಳು.
- ಬಿಎಸ್‌ಇ ಅಥವಾ ಎನ್‌ಎಸ್‌ಇ ಗಳಲ್ಲಿ ಲಿಸ್ಟ ಆಗಿರುವ ಐಟಿ, ಬ್ಯಾಂಕಿಂಗ್ ಮತ್ತು ಹಣಕಾಸು, ಆರೋಗ್ಯ/ಫಾರ್ಮಸಿ, ಎನರ್ಜಿ/ಪವರ್, ಟೆಲಿಕಾಂ, ಇನಫ್ರಾಸ್ಟ್ರಕ್ಚರ್ ಮುಂತಾದ ಕ್ಷೇತ್ರದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು. ಆಯಾ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ/ ಗ್ರಾಚ್ಯುಯಿಟಿ ಮತ್ತು ರಜೆ ದಿನಗಳ ದಾಖಲೆಯನ್ನು ಈ ಕಂಪನಿಗಳು ಹೊಂದಿರಬೇಕು
ಕಾಮೆಂಟ್ ಪೋಸ್ಟ್ ಮಾಡಿ